ಪ್ರೋತ್ಸಾಹಕಗಳು	

	ಪ್ರೋತ್ಸಾಹಕಗಳೆಂದರೆ, ಸಾಮಾನ್ಯ ಅರ್ಥದಲ್ಲಿ. ಜೀವಿಯ ಅಥವಾ ವ್ಯಕ್ತಿಯ ಆಗತ್ಯಗಳನ್ನು ಪೂರೈಸುವ ಬಾಹ್ಯವಸ್ತು ವಿಷಯಗಳು. ಹಸಿದವನಿಗೆ ಸಿಗುವ ಅನ್ನ, ಕಾರ್ಮಿಕರಿಗೆ ಸಿಗುವ ಹೆಚ್ಚಿನ ಆರ್ಥಿಕ-ಸಾಮಾಜಿಕ ಸೌಲಭ್ಯ, ವಿದ್ಯಾರ್ಥಿಗಳಿಗೆ ಸಿಗುವ ಮೆಚ್ಚು ನುಡಿ, ಪ್ರಸಿದ್ಧ ವಿಜ್ಞಾನಿ ಅಥವಾ ಸಾಹಿತಿಗೆ ಸಿಗುವ ಮಾನಸನ್ಮಾನ-ಇವುಗಳೆಲ್ಲ ಪ್ರೋತ್ಸಾಹಕಗಳೆನಿಸುತ್ತವೆ. ವ್ಯಕ್ತಿಯ ಚಿಂತನೆ ಭಾವನೆ ಹಾಗೂ ಕಾರ್ಯ ನಿರ್ವಹಣೆಗಳ ಮೇಲೆ ಇಂಥ ಪ್ರೋತ್ಸಾಹಕಗಳ ಪ್ರಭಾವ ವ್ಯಾಪಕವಾಗಿರಬಹುದು.

	ಮನೋವೈಜ್ಞಾನಿಕ ಪರಿಭಾಷೆಗಳಲ್ಲಿ. ಪ್ರೋತ್ಸಾಹಕಗಳಿಗೆ, ಅವುಗಳ ಕ್ರಿಯಾನುಸಾರವಾಗಿ ಅರ್ಥವನ್ನು ಕೊಡಲಾಗುತ್ತದೆ. ಇಲ್ಲಿ ವ್ಯಕ್ತಿಯ ಅಗತ್ಯ ಪೂರೈಕೆ ಅಥವಾ ಸಂತೃಪ್ತಿಯೇ ಪ್ರೋತ್ಸಾಹಕಗಳ ಗುರಿಯಾಗಿದೆ, ಆತನನ್ನು ಸಕ್ರಿಯಗೊಳಿಸುವುದೂ ಆಗಿರುತ್ತದೆ. ಅಂದಮೇಲೆ ಪ್ರೋತ್ಸಾಹಕಗಳೆನಿಸುವ ಬಾಹ್ಯ ವಸ್ತು ವಿಷಯಗಳು ಒಂದಲ್ಲ ಒಂದು ರೀತಿಯಲ್ಲಿ ವ್ಯಕ್ತಿವರ್ತನೆಗೆ ಅಭಿಪ್ರೇರಕಗಳು ಮಾತ್ರವಲ್ಲದೆ, ವರ್ತನೆಯ ಪುನರ್ಬಲಕಗಳೂ ಆಗಿರಬೇಕಾಗುತ್ತದೆ. ಉದಾಹರಣೆಗೆ, ಶಾಲೆಯಲ್ಲಿ ಬೋಧಕರಿಂದ ವಿದ್ಯಾರ್ಥಿಗೆ ದೊರೆಯಬಹುದಾದ ಶ್ಲಾಘನೆ. ಆತನ ಕಲಿಕೆಗೆ ಅಭಿಪ್ರೇರಕವಾಗುವುದರ ಜೊತೆಗೆ ಆ ಕಲಿಕೆಯನ್ನು ಪುನರ್ಬಲನೆಗೊಳಿಸುವ ಸಾಧ್ಯತೆಯೂ ಇರುತ್ತದೆ. ವ್ಯಕ್ತಿವ್ಯವಹಾರಗಳ ಎಲ್ಲ ಕ್ಷೇತ್ರಗಳಲ್ಲಿಯೂ ಸಾಮಾನ್ಯವಾಗಿ, ಒಂದಲ್ಲ ಒಂದು ರೀತಿಯ ಪ್ರೋತ್ಸಾಹಕಗಳ ಪ್ರಭಾವ ಇದ್ದೇ ಇರುತ್ತದೆ.

	ಮನೋವಿಜ್ಞಾನಿಗಳು ಪ್ರಮುಖವಾಗಿ, ಶಿಕ್ಷಣ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಕಂಡುಬರುವ ಪ್ರೋತ್ಸಾಹಕಗಳ ಮೇಲೂ ಪ್ರಯೋಗಾಲಯದಲ್ಲಿ ಅವರೇ ನಿಯಂತ್ರಿಸುವ ಪ್ರೋತ್ಸಾಹಕಗಳ ಮೇಲೂ ಅಧ್ಯಯನ ನಡೆಸಿದ್ದಾರೆ. ಇದರಿಂದಾಗಿ ಅನೇಕ ತಥ್ಯಾಂಶಗಳು ಬೆಳಕಿಗೆ ಬಂದಿವೆ. ಶೈಕ್ಷಣಿಕ ಪ್ರಕ್ರಿಯೆಯಲ್ಲೂ, ಪ್ರೋತ್ಸಾಹಕಗಳ ಪಾತ್ರ ಅನುಪಮವೆಂಬುದು ಅನುಭವಿಕ ಮತ್ತು ಪ್ರಾಯೋಗಿಕ ಸತ್ಯ. ಈ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿಸಲು ಬೋಧಕರು ಶ್ಲಾಘನೆ, ಮೆಚ್ಚು ಫಲಿತಾಂಶಜ್ಞಾನ ಮುಂತಾದ ಪ್ರೋತ್ಸಾಹಕಗಳನ್ನು ಬಳಸುತ್ತಾರೆ. ಮೆಚ್ಚನ್ನು ಉಪಯುಕ್ತ ಪ್ರೋತ್ಸಾಹಕವನ್ನಾಗಿ ಕ್ರಮವರಿತು ಬಳಸಬಲ್ಲ ಬೋಧಕ ತರಗತಿಯಲ್ಲಿ ಉತ್ತಮ ಸಾಂಘಿಕ ಸಾಹಚರ್ಯವನ್ನು ಸೃಜಿಸಬಲ್ಲ. ಇದರಿಂದಾಗಿ, ವರ್ತನಾ ಸಮಸ್ಯೆಗಳ ಪರಿಹಾರಕ್ಕೆ ವ್ಯಯವಾಗುವ ಶಕ್ತಿಯನ್ನು ಸಂಚಯಿಸಿ, ಬೋಧನೆ ಮತ್ತು ಮಾರ್ಗದರ್ಶನಗಳತ್ತ ಹರಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಕಲಿಕೆ ಪ್ರಕ್ರಿಯೆಯನ್ನು ಉತ್ತೇಜಿಸಲು, ಬೋಧಕ ಮೊದಮೊದಲು, ಬಾಹ್ಯ ಪ್ರೇರಕಗಳನ್ನು ಬಳಸಿದರೂ ಕ್ರಮೇಣ ಅವುಗಳಿಂದ ಪ್ರಾಪ್ತವಾಗುವ ಅನುಭವವೇ ಉತ್ತೇಜನಕಾರಿಯಾಗುವುದನ್ನು ಕಾಣಬಹುದು. ಉದಾಹರಣೆಗೆ, ಮಕ್ಕಳಲ್ಲಿ ಶೋಧನಾಭಿರುಚಿಯನ್ನು ಉತ್ತೇಜಿಸಲೆಂದು. ಬೋಧಕ ಸಂಪತ್ತು ಶೋಧನೆಯಂಥ ಕ್ರೀಡಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಬಹುದು. ಮೊದಮೊದಲು ಪುರಸ್ಕಾರದ ಆಸೆಯಿಂದ ವಿದ್ಯಾರ್ಥಿಗಳು ಭಾಗವಹಿಸಿದರೂ ಬರುಬರುತ್ತ ಆ ಕಾರ್ಯಕ್ರಮದಲ್ಲಿನ ಪ್ರಕ್ರಿಯೆಗಳೇ ಉತ್ತೇಜನಕಾರಿಗಳಾಗಬಹುದು. ಸಂಪತ್ತನ್ನು ಶೋಧಿಸುವ ಸಲುವಾಗಿ ಭೂಪಟವನ್ನು ಪರಿಶೀಲಿಸುವುದು, ಕುರುಹು ಮತ್ತು ನಿರ್ದೇಶನಗಳನ್ನು ಅನುಸರಿಸಿಕೊಂಡು ಹೋಗುವುದು ಮುಂತಾದ ಕ್ರಿಯೆಗಳೇ ಕ್ರಮೇಣ ಪುರಸ್ಕಾರಗಳಾಗಿ, ಉತ್ಸಾಹಕಗಳಾಗಿ ಪರಿಣಮಿಸುತ್ತವೆ. ಇದರಂತೆಯೇ ತರಗತಿಯಲ್ಲಿ ಉತ್ತಮ ದರ್ಜೆ ಪಡೆಯಲೆಂದು ಪರಿಶ್ರಮಿಸುವ ವಿದ್ಯಾರ್ಥಿ ತನ್ನ ಅಭ್ಯಾಸ ಕ್ರಿಯೆಯಿಂದಲೇ ಉತ್ತೇಜಿತನಾಗಿ ಜ್ಞಾನಾರ್ಜನೆಯನ್ನು ಮುಂದುವರಿಸಬಹುದು. ಪುರಸ್ಕಾರದಂತೆ ದಂಡನೆಯೂ ಕೆಲವುವೇಳೆ, ಪ್ರೋತ್ಸಾಹಕವಾಗಬಲ್ಲದು. ಆದರೆ ಅದರ ಪರಿಣಾಮ ತಾತ್ಕಾಲಿಕವಾದುದು. ಅಹಿತಕರ ವರ್ತನೆಯನ್ನು ತಡೆಗಟ್ಟಲು ದಂಡನೆ ನೆರವಾಗಬಲ್ಲದಾದರೂ ಆ ವರ್ತನೆಯನ್ನು ನಿರ್ಮೂಲನ ಮಾಡುವುದರಲ್ಲಿ ಅದು ನಿರುಪಯುಕ್ತವೆನಿಸುತ್ತದೆ. ಕೌಮಿನ್ ಮತ್ತು ಗಫ್ (1968) ನಡೆಸಿದ ಅಧ್ಯಯನವೊಂದರಲ್ಲಿ, ದಂಡನೆಗಿಂತ ಪುರಸ್ಕಾರ ಹೆಚ್ಚು ಪರಿಣಾಮಕಾರಿ ಪ್ರೋತ್ಸಾಹಕವೆಂಬುದು ಕಂಡುಬಂದಿದೆ. ಇದಕ್ಕೆ ಬೆಂಬಲವಾಗಿ ಹರ್‍ಲಾಕ್ ಮುಂತಾದವರ ಅಧ್ಯಯನಗಳಿಂದ ಯುಕ್ತ ತಥ್ಯಾಂಶಗಳು ಹೊರಬಿದ್ದಿವೆ. ದಂಡನಪ್ರಿಯ ಶಿಕ್ಷಕನ ಕೈಗೆ ಸಿಕ್ಕಿದ ಮಕ್ಕಳು ತಮ್ಮ ಕೆಟ್ಟ ಚಾಳಿಗಳ ಬಗ್ಗೆ ಹೆಚ್ಚು ಆಕ್ರಮಣಶೀಲರಾಗುವುದು ಕಂಡುಬಂದಿದೆ. ಅಲ್ಲದೆ ಅವರು ಶಾಲಾಮೌಲ್ಯಗಳ ಬಗ್ಗೆ ಹೆಚ್ಚು ನಿರಾಸಕ್ತರೂ ಶಾಲಾ ನಡೆವಳಿಕೆಗಳ ಬಗ್ಗೆ ಹೆಚ್ಚು ಹೊಣೆಗೇಡಿಗಳೂ ಆಗುವುದನ್ನು ಕಾಣಬಹುದು. ದಂಡನೆ ಕಳವಳ ಮತ್ತು ಭಯಕ್ಕೆ ಎಡೆಮಾಡಿಕೊಡುವುದರಿಂದ ತಾತ್ಕಾಲಿಕವಾಗಿ ಅಹಿತ ವರ್ತನೆಯನ್ನು ತಡೆಯಲು ಸಮರ್ಥವಾಗುತ್ತದೆ ಅಷ್ಟೆ.

	ಕಾರ್ಯಕ್ಷೇತ್ರಗಳಲ್ಲಿ ಮಾನವಶ್ರಮವನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ನಾನಾ ವಿಧವಾದ ಪ್ರೋತ್ಸಾಹಕಗಳನ್ನು ಬಳಸಲಾಗುತ್ತದೆ. ಅಂಥ ಪ್ರೋತ್ಸಾಹಕಗಳು ಬಹು ಮುಖ್ಯವಾಗಿ ಹಣದ ಮತ್ತು ಸಾಮಾಜಿಕ ಸೌಲಭ್ಯಗಳ ರೂಪದಲ್ಲಿರುತ್ತವೆ. ವಿಮೆ, ನಿವೃತ್ತಿವೇತನ, ಉಚಿತಾರ್ಥ, ಬಡ್ತಿ ಮುಂತಾದ ಸರ್ವೇಸಾಮಾನ್ಯ ಪ್ರೋತ್ಸಾಹಕಗಳಲ್ಲದೆ, ಸೆರಗುಸಹಾಯಗಳೆನಿಸಿದ ವಿಶೇಷ ರಜೆ, ಕ್ರೀಡೆ ಮನೋಲ್ಲಾಸಗಳಿಗೆ ಬೇಕಾದ ಸೌಲಭ್ಯಗಳು, ಮಕ್ಕಳ ವ್ಯಾಸಂಗಕ್ಕೆ ಸಹಾಯ, ಸಂಸ್ಥೆಯ ಸದಸ್ಯನಾಗಿರುವುದರಿಂದ ಸಮಾಜದಲ್ಲಿ ದೊರೆಯುವ ಸ್ಥಾನಮಾನ ಮುಂತಾದವೂ ಪರಿಣಾಮಕಾರಿ ಪ್ರೋತ್ಸಾಹಕಗಳಾಗಿರಬಹುದು. ಆದರೆ ಈ ಪ್ರೋತ್ಸಾಹಕಗಳೆಲ್ಲ ಸಂಬಂಧಪಟ್ಟವರಿಗೆ ಕಾರ್ಯಪ್ರೇರಣೆ ಒದಗಿಸಲು ಅಸಮರ್ಥವಾದಾಗ ನಿಷ್ಫಲವಾಗುತ್ತವೆ. ಅವು ಕಾಯಕದ ಸಾಮಾಜಿಕ ಮಾನಸಿಕ ಸ್ವಭಾವವನ್ನು ಕಡೆಗಣಿಸಿದಾಗ ಹಾಗಾಗುವುದು ಅನಿವಾರ್ಯ. ನೀನು ಹೆಚ್ಚು ಶ್ರಮವಹಿಸಿ ಕೆಲಸ ಮಾಡಿದರೆ, ನಿನಗೆ ಹೆಚ್ಚು ದೊರೆಯುತ್ತದೆ ಎಂಬ ಧೋರಣೆ ಸಾಮಾಜಿಕ ಸಂಬಂಧಗಳನ್ನೇ ಕಡೆಗಣಿಸುವ ಸಾಧ್ಯತೆ ಹೆಚ್ಚು. ಉದಾಹರಣೆಗೆ, ಸಹಕಾರ ವಿಧಾನ ಬಳಕೆಯ ಮೂಲಕ ಹೆಚ್ಚು ಕೆಲಸ ತೆಗೆಯುವ ಉದ್ದೇಶದಿಂದ ಜಾರಿಗೆ ಬಂದ ಸಮೂಹ ಪ್ರೋತ್ಸಾಹಕ ವ್ಯವಸ್ಥೆಯೂ ಕೂಡ ನಿರುಪಯುಕ್ತವಾದುದು ಕಂಡುಬಂದಿದೆ. ಏಕೆಂದರೆ, ಇಲ್ಲಿಯೂ ಸಾಮಾಜಿಕ ಸಂಬಂಧಗಳಿಗೆ ಬದಲಾಗಿ ಉತ್ಪಾದನೆಗೇ ಹೆಚ್ಚು ಮಹತ್ತ್ವ ಕೊಡಲಾಗುತ್ತದೆ. ಆದರೆ ಚೆಲುವಿನಭಾವ, ಪ್ರಗತಿಭಾವ, ಸುರಕ್ಷಿತಭಾವ, ಮನೋಸಂತೃಪ್ತಿ ಮುಂತಾದ ಮನೋಸಾಮಾಜಿಕ ಭಾವನೆಗಳನ್ನು ಕಾಯಕದೊಂದಿಗೆ ಬೆಳೆಸಬಲ್ಲ ಪ್ರೋತ್ಸಾಹಕಗಳು ಹೆಚ್ಚು ಪರಿಣಾಮಕಾರಿಗಳಾಗುವುದು ಕಂಡುಬಂದಿದೆ. ಇಲ್ಲಿ ಬಹುಮುಖ್ಯವಾಗಿ ಪ್ರೋತ್ಸಾಹಕಗಳನ್ನು ವ್ಯಕ್ತಿ ಯಾವ ದೃಷ್ಟಿಯಿಂದ ನೋಡುತ್ತಾನೆಂಬುದು ಗಮನಾರ್ಹ ಅಂಶ. ತಾನು ಸಮಾಜದಲ್ಲಿ ಘನತೆವೆತ್ತ ಸಂಸ್ಥೆಯೊಂದರ ಸದಸ್ಯ, ತನ್ನ ಶಕ್ತಿಸಾಮಥ್ರ್ಯಗಳ ಅಭಿವ್ಯಕ್ತಿಗೆ ಆಗತ್ಯ ಅವಕಾಶವಿದೆ, ತನ್ನ ರಚನಾತ್ಮಕ ಸೃಜನಾತ್ಮಕ ವಿಚಾರಗಳಿಗೆ ಮಾನ್ಯತೆ ಇದೆ. ತನಗೆ ಅರ್ಹ ಸ್ಥಾನಮಾನವಿದೆ ಎಂದು ಮುಂತಾದ ಭಾವನೆಗಳೇ ಪರಿಣಾಮಕಾರಿ ಕಾರ್ಯ ಪ್ರೋತ್ಸಾಹಕಗಳಾಗುತ್ತವೆ. ಆದರೆ ಅಂಥ ಭಾವನೆಗಳ ಬೆಳೆವಣಿಗೆಗೆ ಪ್ರೋತ್ಸಾಹಕಾರಿ ಬಾಹ್ಯ ಪರಿಸರದ ಅಗತ್ಯವನ್ನು ಅಲ್ಲಗಳೆಯುವಂತಿಲ್ಲ. ಒಟ್ಟಿನಲ್ಲಿ ಸಾಂಸ್ಥಿಕ ಗುರಿಗಳ ಪ್ರಭಾವದಲ್ಲಿ, ವ್ಯಕ್ತಿಯ ಗುರಿಗಳು ಮಸುಕಾಗದಂತೆ ತಡೆದು. ಅವನ್ನು ಜೀವಂತವನ್ನಾಗಿ ಉಳಿಸಿ ಬೆಳಸುವ ಪ್ರೋತ್ಸಾಹಕಗಳು ಕಾಯಕದ ಸಾಮೂಹಿಕ ಹಾಗೂ ವೈಯಕ್ತಿಕ ಶುಭ ಪರಿಣಾಮಗಳಿಗೆ ಕಾರಣವಾಗುತ್ತವೆ.

	ಸಾಮಾಜಿಕ ಮಿಲನ ಕ್ಷೇತ್ರದಲ್ಲಿಯೂ ಯುಕ್ತ ಪ್ರೋತ್ಸಾಹಕಗಳ ಅಗತ್ಯವಿರುತ್ತದೆ. ಉತ್ತಮ ಅಭಿವೃತ್ತಿಗಳನ್ನು ಬೆಳೆಸುವುದರಲ್ಲಿಯೂ ಅಹಿತ ಅಭಿವೃತ್ತಿಗಳ ಬದಲಾವಣೆಯಲ್ಲಿಯೂ ಪೂರ್ವಾಗ್ರಹಗಳನ್ನು ತೊಡೆದುಹಾಕುವುದರಲ್ಲಿಯೂ ಪ್ರೋತ್ಸಾಹಕಗಳು ವಹಿಸಬಹುದಾದ ಪಾತ್ರ ಮಹತ್ತ್ವಪೂರ್ಣವಾದುದು. ಉದಾಹರಣೆಗೆ, ರಾಜಕೀಯ ಮತ್ತು ಧಾರ್ಮಿಕ ಮತಾಂತರಗಳಲ್ಲಿ ಸಾಮಾಜಿಕ ಪ್ರೋತ್ಸಾಹಕಗಳ ಬಳಕೆ ಎದ್ದು ಕಾಣುತ್ತದೆ. ಆಸೆ ಆಮಿಷಗಳಿಗೆ ಒಳಗಾಗಿ ಕೆಲವು ವೇಳೆ ಜನ ತಮ್ಮ ಇಚ್ಛೆಗೆ ವಿರುದ್ಧವಾದ ಮತಾವಲಂಬಿಗಳಾಗುವುದು ಐತಿಹಾಸಿಕ ಮಾತ್ರವಲ್ಲದೆ ಪ್ರಾಯೋಗಿಕ ಸತ್ಯವೂ ಹೌದು. ಸ್ಕಾಟ್ (1959), ಬೋಗ್‍ಟ್ರಾಮ್ ವ್ಲಾಡಿಸ್ ಹಾಗೂ ರೇಸನ್‍ಬಾಮ್ (1961) ಮುಂತಾದವರ ಸಂಶೋಧನೆಗಳ ಪ್ರಕಾರ, ಪುರಸ್ಕಾರದ ಆಸೆಯಿಂದ ತಮ್ಮ ಇಚ್ಛೆಗೆ ವಿರುದ್ಧವಾದ ವಿಷಯವನ್ನು ಸಮರ್ಥಿಸಿ ವಾದಿಸಿದಾಗಲೂ ಅಂಥ ವಿಷಯವನ್ನು ಸಮರ್ಥಿಸಿ ಪ್ರಬಂಧ ರಚಿಸಿದಾಗಲೂ ಆ ವಿಷಯದ ಬಗ್ಗೆ ಮೊದಲಿದ್ದ ಅಭಿವೃತ್ತಿ ವಿದ್ಯಾರ್ಥಿಗಳಲ್ಲಿ ಬದಲಾದುದು ಕಂಡುಬಂದಿದೆ. ಅಂಥ ಬದಲಾವಣೆ ಹತ್ತು ದಿನಗಳ ಅನಂತರವೂ ಉಳಿದದ್ದು ಗಮನಾರ್ಹ ಅಂಶ.

	ವರ್ತನೆಯ ಮೇಲೆ ಪ್ರೋತ್ಸಾಹಕಗಳು ಬೀರುವ ಪ್ರಭಾವದ ಬಗ್ಗೆ ಸರಿಯಾದ ಅರ್ಥವಿವರಣೆ ಕೊಡಲು ಪ್ರಯತ್ನಗಳು ನಡೆದಿವೆ. ಇಂಥ ಪ್ರಯತ್ನಗಳು ಪ್ರಮುಖವಾಗಿ ಕಲಿಕೆ ಮತ್ತು ಅಭಿಪ್ರೇರಣೆ ಕ್ಷೇತ್ರಗಳಿಗೆ ಸಂಬಂಧಪಟ್ಟಿವೆ. ಟೋಲ್‍ಮನ್, ಹಲ್, ಸ್ಪೆನ್ಸ್, ಮುಂತಾದವರು, ಕಲಿಕೆ ಮತ್ತು ಪ್ರೋತ್ಸಾಹಕಗಳ ನಡುವಣ ಸಂಬಂಧವನ್ನು ವಿವರಿಸಲು ಸಿದ್ಧಾಂತಗಳನ್ನು ರೂಪಿಸಿದ್ದಾರೆ. ಉದಾಹರಣೆಗೆ, ಹಲೆನ್ ಪ್ರಕಾರ ಅನುಕ್ರಿಯೆಯೊಂದಕ್ಕೆ ದೊರೆಯುವ ಪ್ರತಿಫಲದ ಪ್ರಥಮ ಅನುಭವ ಆ ಅನುಕ್ರಿಯೆಯನ್ನು ಮುಂದುವರಿಸುವ ಅಭಿಪ್ರೇರಣೆಯಾಗಿ ಪರಿಣಮಿಸುತ್ತದೆ. ಹೀಗೆ ಉಂಟಾಗುವ ಅಭಿಪ್ರೇರಣೆಯಲ್ಲಿ ಪ್ರತಿಫಲದ ನಿರೀಕ್ಷಣೆ ಅಂತರ್ಗತವಾಗುತ್ತದೆ. ಈ ಸಿದ್ಧಾಂತವನ್ನೇ ವಿಶದೀಕರಿಸಿ, ಪ್ರತಿಫಲವನ್ನು ಪಡೆಯುವ ಮೊದಲೆ ಜೀವಿ ಪೂರೈಕಾನುಕ್ರಿಯೆಯ ಅಂಶಗಳನ್ನು ಪ್ರಕಟಿಸಲು ಪ್ರಾರಂಭಿಸುತ್ತದೆ. ಈ ರೀತಿಯ ನಿರೀಕ್ಷಣೆಯಿಂದ ಉಂಟಾದ ಹಿಂಬಲನ ಆ ಅನುಕ್ರಿಯೆಗಳನ್ನು ಉತ್ತೇಜಿಸಿ ಹೆಚ್ಚು ಪ್ರಬಲವನ್ನಾಗಿಸುತ್ತದೆ. ಸ್ಪೆನ್ಸರನ ಪ್ರಕಾರ ಚೋದನಾಭಿ ಪ್ರೇರಣೆ ಇರುವಂತೆಯೆ ಪ್ರೋತ್ಸಾಹಕಾಭಿಪ್ರೇರಣೆಯೂ ಇರುತ್ತದೆ. ಇವೆರಡೂ ಸೇರಿದಾಗ ಅಭಿಪ್ರೇರಣೆಯ ಮಟ್ಟ ಹೆಚ್ಚಬಹುದು. ತತ್ಫಲವಾಗಿ ವರ್ತನೆ ವಿಸ್ತøತವಾಗುತ್ತದೆ.

	ಕಲಿಕೆಯಲ್ಲಿ ಪ್ರೋತ್ಸಾಹಕಗಳ ಪ್ರಭಾವ ಅನುಪಮವಾದುದು. ಚೋದನ ಶಮನ ಸಿದ್ಧಾಂತದ ಪ್ರಕಾರ, ಪುನರ್ಬಲಕಗಳು ಚೋದನೆಗಳನ್ನು ಶಮನಗೊಳಿಸುವುದರ ಮೂಲಕ ಕಲಿಕೆಯನ್ನು ಉತ್ತೇಜಿಸುತ್ತವೆ. ಉದಾಹರಣೆಗೆ: ಆಹಾರದಿಂದ ಹಸಿವು ಇಂಗುತ್ತದೆ ಅಥವಾ ಮೈಥುನದಿಂದ ಕಾಮೇಚ್ಛೆ ಶಮನವಾಗುತ್ತದೆ ಎಂಬುದು ಸ್ವಲ್ಪಮಟ್ಟಿಗೆ ನಿಜ. ಆದರೆ ಈ ಪ್ರೋತ್ಸಾಹಕಗಳು (ಆಹಾರ, ಮೈಥುನ) ಚೋದನೆಯನ್ನು ಶಮನಗೊಳಿಸಿದರೂ ಜೀವಿಯನ್ನು ನಿಷ್ಕ್ರಿಯಿಯನ್ನಾಗಿಸದೆ, ಉತ್ತೇಜಿಸುತ್ತವೆ ಎಂಬುದು ಗಮನಾರ್ಹ ಅಂಶ. ಅಂಥ ಉತ್ತೇಜನೆಯೇ ಪುನರ್ಬಲಕವಾಗಿ ಪರಿಣಮಿಸುತ್ತದೆ. ಅಂದಮೇಲೆ ಉತ್ತೇಜಿಸುವವರಲ್ಲಿ ಪುನರ್ಬಲನ ಮೌಲ್ಯವೂ ಅಂತರ್ಗತವಾಗಿರುತ್ತದೆ ಎಂದಂತಾಯಿತು. ಯಾವುದಾದರೂ ಅಗತ್ಯದ ಪೂರೈಕೆಗೆ ಕಾರ್ಯಾಚರಣೆ ಮುಂದುವರಿಯಲು ಪುನರ್ಬಲನ ಅವಶ್ಯಕತೆ ಇರುತ್ತದೆ. ತನಗೆ ಬಹಳ ಪ್ರಿಯವಾದ ಆಹಾರದ ಆಯ್ಕೆಯನ್ನು ಜೀವಿಯು, ಪ್ರತಿಫಲದ ಬೆಂಬಲದಿಂದ ಕಲಿಯುತ್ತದೆ. ಆದರೆ ಪುನರ್ಬಲದಲ್ಲಿ ಬದಲಾವಣೆಯಾದಾಗ, ಜೀವಿಯ ಆಯ್ಕೆಯಲ್ಲಿಯೂ ಬದಲಾವಣೆ ಸಂಭವಿಸುವುದನ್ನು ಕಾಣಬಹುದು. ಅದಕ್ಕೆ ಇಷ್ಟವಿಲ್ಲದ ಕ್ರಿಯೆಗೇ ಪ್ರತಿಫಲ ದೊರೆತರೆ, ಮೊದಲಿನ ಆಯ್ಕೆಯತ್ತ ಒಲವು ಕಡಿಮೆಯಾಗಿ ಎರಡನೆಯ ಆಯ್ಕೆಯತ್ತ ಒಲವು ಹೆಚ್ಚುತ್ತದೆ. ಇಂಥ ಘಟನೆಗೆ ಪ್ರೋತ್ಸಾಹಕಾಭಿಪ್ರೇರಣೆ ಎಂದು ಹೇಳಲಾಗುತ್ತದೆ. ಪ್ರತಿಫಲಕ್ಕೆ ಉತ್ತೇಜಕ ಗುಣಗಳನ್ನು ಆರೋಪಿಸಿದ ಹಲವು ಸೈದ್ಧಾಂತಿಕರು, ಪ್ರೋತ್ಸಾಹಕಾಭಿಪ್ರೇರಣೆಯನ್ನು ವಿವರಿಸಲು, ನಿರೀಕ್ಷಣೆ, ಉತ್ತೇಜನೆ, ಚೇತನಕರಣ ಮುಂತಾದ ಕಲ್ಪಿತಭಾವಗಳನ್ನು ಬಳಸಿದ್ದಾರೆ. ಇವುಗಳ ನಡುವೆ ಸೂಕ್ಷ್ಮತರ ವ್ಯತ್ಯಾಸಗಳಿದ್ದಾಗ್ಯೂ ಪ್ರತಿಫಲದ ನಿಯತಾಂಕಗಳಾದ ಪರಿಮಾಣ ಕಾಲ ಮತ್ತು ಗುಣಗಳ ದೃಷ್ಟಿಯಿಂದ ಅವೆಲ್ಲಾ ಸಮ.

	ಕೆಲವು ಸೈದ್ಧಾಂತಿಕಗಳ ಪ್ರಕಾರ, ಪ್ರೋತ್ಸಾಹಕಾಭಿಪ್ರೇರಣೆ ಕೇವಲ ಪ್ರತಿಫಲಗಳೆನಿಸುವ ವಸ್ತುವಿಷಯಗಳಿಗೆ ಸಂಬಂಧಿಸಿರದೆ, ಗುರಿಸಾಧನೆಗೆ ಮೊದಲೇ ಉಂಟಾಗುವ ಪೂರೈಕಾನುಕ್ರಿಯೆಗೂ ಸಂಬಂಧಿಸಿರುತ್ತದೆ. ಉದಾಹರಣೆಗೆ ಹೆಚ್ಚಿನ ಸಂಬಳ ಕಾರ್ಮಿಕ ಪರಿಶ್ರಮಕ್ಕೆ ಪ್ರೋತ್ಸಾಹಕವಾಗುವುದು ವಾಸ್ತವ ಹಾಗೂ ಸ್ಪಷ್ಟವಾದರೂ ಆ ಪ್ರತಿಫಲವನ್ನು ಪಡೆಯುವ ನಿರೀಕ್ಷಣೆಯೆ ಅವರಲ್ಲಿ ಹೆಚ್ಚಿನ ಪರಿಶ್ರಮವನ್ನು ಪ್ರೋತ್ಸಾಹಿಸಬಲ್ಲದು.

	ಕಲಿಕೆಯ ಮಟ್ಟವನ್ನು ನಿರ್ಧರಿಸುವಲ್ಲಿ ಪುರಸ್ಕಾರದ ಪರಿಮಾಣ ಮತ್ತು ಅಭ್ಯಾಸಗಳಿಗೆ ಸಂಬಂಧಿಸಿದಂತೆ ಸೈದ್ಧಾಂತಿಕದಲ್ಲಿ ಭಿನ್ನಾಭಿಪ್ರಾಯವಿದೆ. ಪುನರ್ಬಲನ ಸೈದ್ಧಾಂತಿಕರ ಪ್ರಕಾರ ಪುರಸ್ಕಾರದ ಪರಿಮಾಣ ಕಲಿಕೆಯ ಮಟ್ಟವನ್ನು ನಿರ್ಧರಿಸಿದರೆ, ನಿಕಟತೆ ಸೈದ್ಧಾಂತಿಕ ಪ್ರಕಾರ ಅಭ್ಯಾಸ ಕಲಿಕೆಯ ಮಟ್ಟವನ್ನು ನಿರ್ಧರಿಸುತ್ತದೆ. ಈ ಭಿನ್ನಾಭಿಪ್ರಾಯ ನಿವಾರಣೆಗೆ ಅನೇಕ ಪ್ರಯೋಗಗಳು ನಡೆದು ಅಂತರ್ಗತ ಕಲಿಕೆ ಅಸ್ತಿತ್ವ ಬೆಳಕಿಗೆ ಬಂದಿದೆ. ಉದಾಹರಣೆಗೆ ಯಾವುದೇ ಪ್ರಕಟ ಪುರಸ್ಕಾರವಿಲ್ಲದಿದ್ದಾಗಲೂ ಇಲಿ ತನ್ನ ವ್ಯೂಹಶೋಧನ ಕಾರ್ಯವನ್ನು ಮುಂದುವರಿಸುತ್ತದೆ. ವಿಳಂಬಿಸಿ ಆಹಾರವನ್ನು ಕೊಟ್ಟಾಗ ಅದರ ಕಾರ್ಯಾಚರಣೆಯ ವೇಗ ನಾಟಕೀಯವಾಗಿ ಬದಲಾವಣೆ ಹೊಂದುತ್ತದೆ. ಅದು ನೇರವಾಗಿ ಗುರಿಯತ್ತ ಓಡುತ್ತದೆ. ಪುರಸ್ಕಾರ ದೊರೆಯುವವರೆಗೂ ತಾನು ಕಲಿತದ್ದನ್ನು ಇಲಿ ಪ್ರಕಟಿಸದಿರುವುದನ್ನು ಕಾಣಬಹುದು. ಇದರಂತೆಯೇ ಪುರಸ್ಕಾರದ ಪರಿಮಾಣದಲ್ಲಿ ವ್ಯತ್ಯಾಸವಾದಾಗಲೂ ಇಲಿಗಳ ವರ್ತನೆಯಲ್ಲಿ ಗಣನೀಯ ವ್ಯತ್ಯಾಸ ಕಂಡುಬಂತು. ಪುರಸ್ಕಾರದ ಪರಿಮಾಣ ಹೆಚ್ಚಾದಾಗ ಇಲಿಗಳ ಚೈತನ್ಯ ಹೆಚ್ಚಾಯಿತು. ಆದರೆ ಆ ಪರಿಮಾಣ ಕಡಿಮೆಯಾದಾಗ ಕೂಡಲೇ ಚೈತನ್ಯ ಕುಗ್ಗಿತ್ತು. ಪುರಸ್ಕಾರದ ಜೊತೆಗೆ, ಜೀವಿಯ ಭಾವನೆಯೂ ಕಲಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವುದನ್ನು ಈ ಪ್ರಯೋಗಗಳಿಂದ ಕಾಣಬಹುದು. ಆದ್ದರಿಂದ ಕಲಿಕೆಯಲ್ಲಿ ನಿವ್ವಳ ಪ್ರೋತ್ಸಾಹಕ ಅಭಿಪ್ರೇರಣೆಯ ಪಾತ್ರ ಹಿರಿದು. 

ಜೀವಿ ಬೆಲೆ ಕೊಡುವ ಯಾವುದೇ ವಸ್ತು, ವಿಷಯ ಅಥವಾ ಘಟನೆ ಅದನ್ನು ಪಡೆಯಲು ಜೀವಿಗೆ ಬೇಕಾದ ಅಭಿಪ್ರೇರಣೆಯನ್ನು ಪ್ರೋತ್ಸಾಹಿಸುತ್ತದೆ. ಗುರಿ ಆಹಾರವಾಗಿರಲಿ, ರತ್ನವಾಗಿರಲಿ, ಅಥವಾ ಜ್ಞಾನವಾಗಿರಲಿ, ಅದಕ್ಕೆ ಜೀವಿಯ ದೃಷ್ಟಿಯಲ್ಲಿ ಎಷ್ಟು ಬೆಲೆ ಎಂಬುದು, ಕಾರ್ಯಾಚರಣೆಗೆ ಬೇಕಾದ ಅಭಿಪ್ರೇರಣೆ ಒದಗಿಸುತ್ತದೆ. ಯಾವುದೇ ಕ್ರಿಯೆಯ ಪರಿಣಾಮ ಆ ಕ್ರಿಯೆಗೆ ಬೇಕಾದ ಉತ್ತೇಜನ ಅಥವಾ ಪ್ರತಿಬಂಧನ ಸ್ಥಿತಿಯನ್ನು ಜೀವಿಯಲ್ಲಿ ಪೂರ್ವಭಾವಿಯಾಗಿಯೆ ನಿರ್ಮಿಸಬಹುದು. ಸಮಗ್ರವಾಗಿ ನೋಡಿದಾಗ, ಪ್ರೋತ್ಸಾಹಕಗಳು, ಜೀವಿಯ ವರ್ತನೆಯ ಮೇಲೆ ಸಂಕೀರ್ಣ ರೀತಿಯ ಪ್ರಭಾವವನ್ನು ಬೀರುವುದು ಕಂಡುಬರುತ್ತದೆ.
(ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ